ಜಿಲ್ಲಾ ಸುದ್ದಿ

380 ಕಿಲೋ ಮೀಟರ್ ನಷ್ಟು ಉರುಳು ಸೇವೆ ಮೂಲಕ ದೇವರ ದರ್ಶನಕ್ಕೆ ಹೊರಟ ಪಂಡರಿಪುರ ಭಕ್ತ..!

ಬಾಗಲಕೋಟೆ: ಹೀಗೆ ಗೋಣಿ ಚೀಲ ಸುತ್ತಿಕೊಂಡು ಉರುಳು ಸೇವೆ ಮಾಡುತ್ತಾ ಸಾಗುತ್ತಿರುವ ಇವರು ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದ 50ರ ಹರೆಯದ ಈಶ್ವರ ಯಲ್ಲಪ್ಪ ಅಂಬಣ್ಣವರ.ಅಂದಹಾಗೆ ಇವರು ಹೊರಟಿರುವುದು ತಮ್ಮ ಸ್ವಗ್ರಾಮದಿಂದ ಮಹಾರಾಷ್ಟ್ರದ ಫಂಡರಪುರ ವಿಠ್ಠಲನ ಸಾನಿಧ್ಯಕ್ಕೆ. ಅದೂ ಕೂಡಾ ಹೆದ್ದಾರಿಯಲ್ಲಿ ಉರುಳು ಸೇವೆ ಮಾಡಿ. ಸದ್ಯ ಅವರು ಉರುಳುತ್ತಾ ಉರುಳುತ್ತಾ ಬಾಗಲಕೋಟೆ ಜಿಲ್ಲೆ ತಲುಪಿದ್ದಾರೆ. ಒಟ್ಟು 380 ಕಿಲೋ ಮೀಟರ್ ನಷ್ಟು ಉರುಳು ಸೇವೆಯನ್ನ ಈ ಈಶ್ವರ ಯಲ್ಲಪ್ಪ ಕೈಗೊಳ್ಳಲಿದ್ದಾರೆ.

ಹಲವಾರು ಭಕ್ತರು ಪಾದಯಾತ್ರೆ ಮತ್ತು ಸೈಕಲ್ ಮೂಲಕ ತೆರಳಿ ಹರಕೆ ತೀರಿಸುವುದನ್ನ ನೋಡಿದ್ದೇವೆ. ಆದರೆ ಈಶ್ವರ ಯಲ್ಲಪ್ಪ ಅಂಬಣ್ಣವರ ಉರುಳು ಸೇವೆ ಮೂಲಕ ದೇವರ ಹರಕೆ ತೀರಿಸಲು ಮುಂದಾಗಿದ್ದಾರೆ. ಸವದತ್ತಿ, ಹುಲಕುಂದ, ಯಾದವಾಡ, ಶಿರೋಳ, ಸಿದ್ದಾಪುರ ಮಾರ್ಗವಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮೂಲಕ ಜಂಬಗಿ, ಸಾವಳಗಿ, ಜತ್ತ, ಶೇಗಾಂವ್, ಸುನಂದಾ, ಮಾಂಝರಿ, ಕರಡಿ, ಮೂಲಕ ಮಹಾರಾಷ್ಟ್ರದ ಫಂಡರಪುರ ತಲುಪಲಿದ್ದಾರೆ. ಇವರು ಕಳೆದ ಎರಡು ವರ್ಷಗಳಿಂದ ಉರುಳು ಸೇವೆಯನ್ನ ಮಾಡುತ್ತಾ ಬಂದಿದ್ದಾರೆ, ಜನವರಿ 14ರಂದು ಆರಂಭವಾದ ಈ ಉರುಳು ಸೇವೆ ಸುಮಾರು ಒಂದು ತಿಂಗಳವರೆಗೆ ಮುಂದುವರೆಯುತ್ತದೆ. ಪ್ರತಿ ದಿನ ಇವರು 8 ರಿಂದ 10 ಕೀ.ಮಿ.ವರೆಗೆ ಉರುಳು ಸೇವೆಯನ್ನ ಮಾಡುತ್ತಾರೆ. ರಸ್ತೆಯ ಪಕ್ಕದಲ್ಲಿರುವ ದೇವಸ್ಥಾನಗಳಲ್ಲಿ ರಾತ್ರಿಯನ್ನ ಕಳೆಯುತ್ತಾರೆ. ಗ್ರಾಮಸ್ಥರು ಮತ್ತು ವಾಹನ ಸವಾರರು ನೀಡುವ ಹಣ್ಣು ಮತ್ತು ಊಟವನ್ನ ಸ್ವೀಕರಿಸಿ ಮತ್ತೆ ಮುಂದೆ ಸಾಗುತ್ತಾರೆ.

ಇನ್ನು ಅವರ ಕುಟುಂಬಸ್ಥರು ಹಿಂದೆ ಸೈಕಲ್ ನಲ್ಲಿ ಬಟ್ಟೆ, ನೀರು, ಊಟ, ಇತರೆ ವಸ್ತುಗಳನ್ನು ತೆಗೆದುಕೊಂಡು ಈಶ್ವರ ಅವರಿಗೆ ಸಹಾಯ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇಂತಹ ಆಧುನಿಕ ಭರಾಟೆಯಲ್ಲಿಯೂ ಸಾಂಪ್ರದಾಯಿಕ ಪದ್ದತಿ, ದೈವಿಕ ನಂಬಿಕೆಯಲ್ಲಿ ಉರುಳು ಸೇವೆ ಮಾಡುತ್ತಾ ಹರಕೆ ತೀರಿಸುತ್ತಿರುವುದು ನಿಜಕ್ಕೂ ವಿಶೇಷವೇ ಸರಿ.

Related Articles

Leave a Reply

Your email address will not be published. Required fields are marked *

Back to top button