ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ: ಕಂದಾಯ ಸಚಿವರ ವಾಸ್ತವ್ಯಕ್ಕೆ ಸಿದ್ದತೆ..!

ಬಾಗಲಕೋಟೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ಫೆಬ್ರವರಿ 25 ರಂದು ಕಂದಾಯ ಸಚಿವ ಆರ್.ಅಶೋಕ ಅವರು ವಾಸ್ತವ್ಯ ಮಾಡಲಿರುವ ಕಲಾದಗಿ ಗ್ರಾಮದಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ತಿಳಿಸಿದರು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸಿದ್ದತೆ ಪರಿಶೀಲನೆಗಾಗಿ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು ಅಂದು ಬೆಳಿಗ್ಗೆ 11.30ಕ್ಕೆ ಕಲಾದಗಿ ಗ್ರಾಮಕ್ಕೆ ಆಗಮಿಸಲಿರುವ ಕಂದಾಯ ಸಚಿವರಿಗೆ ಗ್ರಾಮದ ಮಹಿಳೆಯರಿಂದ ಆರತಿ ಮಾಡುವ ಮೂಲಕ ಸ್ವಾಗತಿಸಲಾಗುತ್ತದೆ. ನಂತರ ಅಲಂಕೃತಗೊಂಡ ಟ್ರ್ಯಾಕ್ಟರ್‍ನಲ್ಲಿ ಗ್ರಾಮದಲ್ಲಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಗುತ್ತಿದೆ. ಮೆರವಣಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಖ್ಯ ವೇದಿಕೆಗೆ ಆಗಮಿಸಲಿದೆ ಎಂದರು.
ಮುಖ್ಯ ವೇದಿಕೆಯಲ್ಲಿ ವಿವಿಧ ಇಲಾಖೆಯವರು ಹಾಕಿದ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ನಂತರ ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಪರಿಕರ ವಿತರಿಸುವ ಮೂಲಕ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವೇದಿಕೆಯಲ್ಲಿ ವಿವಿಧ ಇಲಾಖೆಗಳ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿ, ಕಾರ್ಯಕ್ರಮ ಕುರಿತು ಮಾತನಾಡಲಿದ್ದಾರೆ. ಸಂಜೆ ವೇಳೆ ಗ್ರಾಮಸ್ಥರ ಅಹವಾಲು ಸ್ವೀಕರ ಕಾರ್ಯಕ್ರಮ, ಗ್ರಾಮ ಸಭೆ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಖಜ್ಜಿಡೋಣಿಯಲ್ಲಿ ಸಚಿವರ ವಾಸ್ತವ್ಯ
ಖಜ್ಜಿಡೋಣಿ ಗ್ರಾಮದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ಶಾಲೆಯಲ್ಲಿ ಕಂದಾಯ ಸಚಿವ ಆರ್.ಅಶೋಕ ವಾಸ್ತವ್ಯ ಹೂಡಲಿದ್ದಾರೆ. ಇವರ ಜೊತೆ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಟಿ.ಭೂಬಾಲನ್ ಸೇರಿದಂತೆ ಇತರೆ ಅಧಿಕಾರಿಗಳು ವಾಸ್ತವ್ಯ ಮಾಡಲಿದ್ದಾರೆ. ಫೆಬ್ರವರಿ 26 ರಂದ ಬೆಳಿಗ್ಗೆ 7.30 ರಿಂದ 8 ವರೆಗೆ ಗ್ರಾಮದ ಜಗಲಿ ಕಟ್ಟೆಯಲ್ಲಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸುವರು. ನಂತರ 9.30ಕ್ಕೆ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಪೌತಿ ಖಾತಾ ಆಂದೋಲ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸಿಇಓ ಟಿ.ಭೂಬಾಲನ್, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನಬಸಪ್ಪ ಕೊಡ್ಲಿ, ತಹಶೀಲ್ದಾರ ಅಮರೇಶ ಪಮ್ಮಾರ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ, ಬೀಳಗಿ ತಹಶೀಲ್ದಾರ ಸುಹಾಸ ಇಂಗಳೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಾಂಡಪ್ಪ ಲಮಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.