30 ರಿಂದ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ

ಬಾಗಲಕೋಟೆ: ಕುಷ್ಠರೋಗವನ್ನು ತಡೆಗಟ್ಟು ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಜನವರಿ 30 ರಿಂದ ಫೆಬ್ರವರಿ 13 ವರೆಗೆ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಕುಷ್ಠರೋಗ ಜಾಗೃತಿ ಅಭಿಯಾನದ ಕುರಿತು ಜರುಗಿದ ಜಿಲ್ಲಾ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸ ಮಾತನಾಡಿದ ಅವರು ಕುಷ್ಠರೋಗ ಒಂದು ಸರಳ ಬ್ಯಾಕ್ಟೀರಿಯಾ ಖಾಯಿಲೆಯಾಗಿದ್ದು, ಸೂಕ್ತ ಚಿಕಿತ್ಸೆಯಿಂದ ಅಂಗವಿಕಲತೆಯಾಗುವದನ್ನು ತಡೆಗಟ್ಟಬಹುದಾಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಕುಷ್ಠರೋಗ ತಡೆಗಟ್ಟುವಲ್ಲಿ ಪಂಚಾಯತ್ ರಾಜ್, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಾರ್ತಾ ಇಲಾಖೆಯ ಸಹಕಾರ ಹಾಗೂ ಜವಾಬ್ದಾರಿ ಅಗತ್ಯವಾಗಿದೆ. ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಲು ಡಂಗೂರು, ಮೈಕಿಂಗ್, ಧ್ವನಿವರ್ದಕಗಳ ಮೂಲಕ ಪ್ರಚಾರ ಕೈಗೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಸ ವಿಲೇವಾರಿ ವಾಹನಗಳ ಮೂಲಕ ಧ್ವನಿವರ್ಧಕದಲ್ಲಿ ಪ್ರಚಾರ ಮಾಡಬೇಕು. ಸರಕಾರಿ, ಖಾಸಗಿ ಕಚೇರಿ, ಶಾಲಾ-ಕಾಲೇಜು, ವಸತಿ ನಿಲಯಗಳಲ್ಲಿ ಜಾಗೃತಿ ಅಭಿಯಾನದಲ್ಲಿ ಸಹಕಾರ ನೀಡುವಂತೆ ಕ್ರಮವಹಿಸಲು ತಿಳಿಸಿದರು.
ಶಾಲಾ ಮಕ್ಕಳಿಂದ ಜನಜಾಗೃತಿ ಜಾಥಾ, ಶಾಲೆಗಳಲ್ಲಿ ಪ್ರಾರ್ಥನಾ ಸಮಯದಲ್ಲಿ ಸ್ಪರ್ಶ ಕುಷ್ಠರೋಗ ಜಾಗೃತಿ ಮೂಡಿಸಬೇಕು. ತಾಯಂದಿರ ಸಭೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಿರಂತರವಾಗಿ ಜಾಗೃತಿ ಮೂಡಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು. ಈ ಸಂದರ್ಭದಲ್ಲಿ ಕುಷ್ಠರೋಗ ಜಾಗೃತಿ ಅಭಿಯಾನದ ಪ್ರಚಾರದ ಪೋಸ್ಟರಗಳನ್ನು ಬಿಡುಗಡೆ ಮಾಡಲಾಯಿತು. ಪ್ರತಿಜ್ಞಾವಿಧಿಯನ್ನು ಸಹ ಬೋಧಿಸಲಾಯಿತು.
ಸಭೆಯಲ್ಲಿ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಶಿವನಗೌಡ ಪಾಟೀಲ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅರವಿಂದ ಪಟ್ಟಣಶೆಟ್ಟಿ, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಬಿ.ಜಿ.ಹುಬ್ಬಳ್ಳಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್, ಜಿಲ್ಲಾ ವಾರ್ತಾಧಿಕಾರಿ ಕಸ್ತೂರಿ ಪಾಟೀಲ, ಡಿಟಿಓ ಸುವರ್ಣ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.